ಆನೆದೊಗಲು
	ಸಾಮಾನ್ಯವಾಗಿ ಕೈಕಾಲುಗಳು ಯೋನಿದುಟಿಗಳು (ಲೇಬಿಯ), ಬೀಜಚೀಲ (ಸ್ಕ್ರೋಟಂ) ಬಲು ಅಪರೂಪವಾಗಿ ಮೊಗ, ಮೊಲೆಗಳ ಚರ್ಮ, ಚರ್ಮದಡಿಯ ಅಂಗಾಂಶಗಳು ಬರಬರುತ್ತ ದಪ್ಪಗೆ ಬೇರೂರಿದಂತೆ ಬೆಳೆದಿರುವುದು (ಎಲಿಫಂಟಿಯಾಸಿಸ್). ರೋಗ ಕಾಲುಗಳಲ್ಲಿ ಬರುವುದೇ ನಮ್ಮಲ್ಲಿ ಸಾಮಾನ್ಯವಾದುದರಿಂದ ಆನೆಗಾಲು, ಹುತ್ತಗಾಲು ಎನ್ನುವುದುಂಟು. ಸಿರ (ವೆಯ್ನ್) ರಕ್ತನಾಳಗಳು ಇಲ್ಲವೇ ಹಾಲ್ರಸನಾಳಗಳ (ಲಿಂಫ್ಯಾಟಿಕ್ಸ್) ತಡೆಯಾಗಿದ್ದರೆ ಹೀಗಾಗುತ್ತದೆ. ಈ ತಡೆಗೆ ಸಾಮಾನ್ಯ ಕಾರಣ ಎಳೆಹುಳು (ನಿಮೆಟೋಡ್). ಗಂಡು ಹುಳುಗಳು ಬೆಳೆವ ಒಂದು ಹಂತದಲ್ಲಿ ಈ ಹುಳುಗಳು ಮಾನವನ ರಕ್ತ, ಹಾಲ್ರಸ ನಾಳಗಳೊಳಕ್ಕೆ ನುಗ್ಗಿ ಇರುಸಿಕೊಂಡು ಮುಂದೆ ದ್ರವ ಹರಿಯದಂತೆ ಆಟಂಕಿಸುತ್ತವೆ. ಹೀಗಾಗುವ ಮುನ್ನ ಹುಳುಬೇನೆ ಹತ್ತಿದಾಗಲೆಲ್ಲ ಹಾಲ್ರಸನಾಳಗಳುರಿತ (ಲಿಂಫ್ಯಾಂಜೈಟಿಸ್), ಚರ್ಮ ಚರ್ಮದಡಿಯ ಅಂಗಾಂಶಗಳ ಉರಿತವಾಗಿ ಮೇಲಿಂದ ಮೇಲೆ ಚಳಿ ಜ್ವರ ಬರುತ್ತದೆ. ಸೊಳ್ಳೆಗಳಿಂದ ಬರುವ ಈ ರೋಗದಿಂದಲೇ ಅಲ್ಲದೆ, ಪೆಟ್ಟು, ಗಾಯ, ಬೇರೆ ಕಾರಣಗಳ ಉರಿತ, ನವ (ವಿಷಮ) ಗಂತಿಗಳಿಂದಲೂ ಹೀಗಾಗಬಹುದು. 
(ನೋಡಿ- ಫೈಲೇರಿಯ-ಬೇನೆ) 
(ನೋಡಿ- ಪರಪಿಂಡಿ-ಶಾಸ್ತ್ರ) 
(ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ